ರುಕ್ಮಿಣಿ
ವಿದರ್ಭ ದೇಶದ ಭೀಷ್ಮಕ ರಾಜನ ಮಗಳು; ಕೃಷ್ಣನ ಹಿರಿಯ ರಾಣಿ, ರುಕ್ಮಕೇಶ. ರುಕ್ಮಿಬಾಹು, ರುಕ್ಮಿಮಾಲ, ರುಕ್ಮರಥ ಈ ನಾಲ್ವರು ಈಕೆಯ ಸಹೋದರರು, ರುಕ್ಮಿ ಇವರ ಆಣ್ಣ. ರುಕ್ಮಿಯನ್ನು ಬಿಟ್ಟು ಉಳಿದವರೆಲ್ಲರೂ ಈಕೆಯನ್ನು ಕೃಷ್ಣನಿಗೆ ಕೊಟ್ಟು ಮದುವೆ ಮಾಡಬೇಕೆಂದಿರುವಾಗ ರುಕ್ಮಿ ಮಾತ್ರ ಈಕೆಯನ್ನು ಶಿಶುಪಾಲನಿಗೆ ಕೊಡಬೇಕೆಂದು ಹಠ ಹಿಡಿದಿದ್ದ. ಮನೆಯಲ್ಲಿನ ವಾತಾವರಣದಿಂದ ಬೇಸತ್ತು ರುಕ್ಮಿಣಿ ಒಬ್ಬ ಬ್ರಾಹ್ಮಣನ ಮೂಲಕ ತನ್ನ ದುರವಸ್ಥೆಯನ್ನು ಕೃಷ್ಣನಿಗೆ ನಿವೇದಿಸಿಕೊಂಡಳು. ಇದನ್ನು ತಿಳಿದ ಕೃಷ್ಣ ರುಕ್ಮಿಣಿ ಇದ್ದೆಡೆಗೆ ಬಂದು, ಆಕೆ ಗೌರೀಪೂಜೆಗಾಗಿ ಸುವಾಸಿನಿಯರ ಜೊತೆ, ಊರ ಹೊರಗಿನ ದೇವಸ್ಥಾನಕ್ಕೆ ಹೊರಟಿದ್ದಾಗ ಅವಳನ್ನು ಅಪಹರಿಸಿಕೊಂಡು ಹೋಗಿ ಮದುವೆಯಾದ. 

ಪ್ರದ್ಯುಮ್ನ ಈಕೆಯ ಮಗ. ಚಾರುಮತಿ ಮಗಳು. ರುಕ್ಮಿಣಿ ಮಹಾಲಕ್ಷ್ಮಿಯಿಂದ, ಆಕೆ ವಾಸಮಾಡುವ ಸ್ಥಳಗಳನ್ನು ತಿಳಿದದ್ದು, ತನ್ನ ವಿವಾಹ ವೃತ್ತಾಂತವನ್ನು ದ್ರೌಪದಿಗೆ ವಿವರಿಸಿ ಹೇಳಿದ್ದು, ಕೃಷ್ಣನ ನಿರ್ಯಾಣಾನಂತರ ರುಕ್ಮಿಣಿಯ ಅಗ್ನಿಪ್ರವೇಶ ಮೊದಲಾದ ವಿಚಾರಗಳು ಭಾಗವತ, ಭಾರತಗಳಲ್ಲಿ ಉಲ್ಲೇಖಗೊಂಡಿದೆ.	           
  (ಎ.ವಿ.ಕೆ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ